ಕೊಲಾಡಿಯನ್

ಆಲ್ಕೊಹಾಲ್ ಮತ್ತು ಈಥರುಗಳ ಮಿಶ್ರಣದಲ್ಲಿ ಗನ್‍ಕಾಟನ್ ಮತ್ತು ಪೈರೊಕ್ಸಲಿನ್‍ಗಳ ಗುಂಪಿಗೆ ಸೇರಿದ ರಸಾಯನ ವಸ್ತುಗಳನ್ನು ಕರಗಿಸುವುದರಿಂದ ಬರುವ ವಸ್ತು. ಇದು ಬಣ್ಣವಿಲ್ಲದ ಅಂಟಾಗಿರುವ ದ್ರವ. ಇದನ್ನು ಗಾಜು ಮುಂತಾದುವುಗಳಿಗೆ ಹಚ್ಚಿದಾಗ ಅದು ಗಟ್ಟಿಯಾಗಿ ತೆಳುಪೊರೆಯಾಗುತ್ತದೆ. ಆಲ್ಕೊಹಾಲ್ ಹೆಚ್ಚಿದ್ದರೆ ಬರುವ ತೆಳುಪೊರೆಗೆ ಅಷ್ಟು ತ್ರಾಣವಿರುವುದಿಲ್ಲ; ಅದು ಸುಲಭವಾಗಿ ಹರಿದುಹೋಗುವುದು. ಈಥರ್ ಹೆಚ್ಚಾಗಿದ್ದರೆ ಬಲು ತ್ರಾಣಿಯಾದ ತೆಳುಪೊರೆ ಬರುತ್ತದೆ. ಸೂಕ್ಷ್ಮದರ್ಶಕದಲ್ಲಿ ಈ ಪೊರೆ ಪಾರದರ್ಶಕ. ಇದನ್ನು ಚರ್ಮದ ಮೇಲೆ ಬಳಿದಾಗ ಅದು ಬೇಗನೆ ಒಣಗಿ ತೆಳುವಾದ ಪೊರೆಯನ್ನು ಬಿಡುತ್ತದೆ. ಈ ಪೊರೆ ಸಂರಕ್ಷಣೆಗೂ ಒತ್ತಿಹಿಡಿಯಲೂ ಅನುಕೂಲ. ಆದ್ದರಿಂದ ಇದನ್ನು ಶಸ್ತ್ರಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ. ಛಾಯಾಚಿತ್ರ ತೆಗೆಯುವುದರಲ್ಲಿಯೂ ಇದರ ಬಳಕೆ ಉಂಟು. ಅಲ್ಲಿ ಅದಕ್ಕೆ ಅಯೊಡೈಡನ್ನು ಹಾಕಲು ಅಮೋನಿಯಂ ಬ್ರೋಮೈಡ್, ಅಯೊಡೈಡ್ ಮತ್ತು ಕ್ಯಾಲ್ಸಿಯಂ, ಕ್ಯಾಡ್ಮಿಯಂ ಅಯೊಡೈಡುಗಳನ್ನು ಬಳಸುತ್ತಾರೆ. ಕೆನಡಾ ಬಾಲ್ಸಮ್ ಮತ್ತು ಹರಳೆಣ್ಣೆಯನ್ನು ಒಳಗೊಂಡ ಕೊಲಾಡಿಯನ್ ಒಣಗಿ ಮುರಿಯದೆ ಬಾಗಬಲ್ಲುದು, ಅಲ್ಲದೆ ಅದು ಸಂಕುಚಿತವಾಗುವುದಿಲ್ಲ. 
(ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ